ಚೌಳುಕ್ಯ

ಗುಜರಾತ್ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಸ್ಥೂಲವಾಗಿ 9-12ನೆಯ ಶತಮಾನಗಳಲ್ಲಿ ಆಳುತ್ತಿದ್ದ ರಾಜಮನೆತನ. ಚಾಳುಕ್ಯ ಮತ್ತು ಚೌಳುಕ್ಯ ಎರಡೂ ಸಮಾನಾರ್ಥಕ ಪದಗಳೆಂದು ಹಲವರು ಭಾವಿಸಿದ್ದರಾದರೂ ಇವೆರಡೂ ಮನೆತನಗಳೆಂದು ಈಗ ಒಪ್ಪಿಕೊಳ್ಳಲಾಗಿದೆ. ಚಾಳುಕ್ಯರು ದಖನ್ ಮತ್ತು ದಕ್ಷಿಣ ಭಾರತಗಳಲ್ಲಿ ಆಳುತ್ತಿದ್ದ ದೊರೆಗಳು.

	ಚೌಳುಕ್ಯರು ಇತಿಹಾಸದಲ್ಲಿ ಗೂರ್ಜರರೆಂದೂ ಶೋಲಂಕಿಗಳೆಂದೂ ಪ್ರಸಿದ್ಧರಾಗಿದ್ದಾರೆ. ಗೂರ್ಜರ ಎಂಬ ಹೆಸರನ್ನು ಮೊದಲು ಇತರ ಕೆಲವು ಅರಸು ಮನೆತನಗಳಿಗೆ ಅನ್ವಯಿಸಲಾಗುತ್ತಿತ್ತು. ಅನಂತರ ಗುಜರಾತಿನ ಚೌಳುಕ್ಯರು ಗೂರ್ಜರರೆನಿಸಿಕೊಂಡರು. ಚೌಳುಕ್ಯರ ಮೂಲದ ಬಗ್ಗೆ ಅನೇಕ ಕಥೆಗಳುಂಟು. ಇವರು ಅಗ್ನಿಕುಲಕ್ಕೆ ಸೇರಿದವರೆಂದು ಒಂದು ಕಥೆ ಹೇಳುತ್ತದೆ. ದಕ್ಷಿಣದ ಚಾಳುಕ್ಯರ ಮೂಲಪುರುಷನಂತೆ ಚೌಳುಕ್ಯರ ಮೂಲಪುರುಷನೂ ಚುಲುಕನ ಮಗನೆಂದು, ಚೌಳುಕ್ಯನೆಂದು ಕೆಲವು ಸಾಂಪ್ರದಾಯಿಕ ಕಥೆಗಳು ಹೇಳುತ್ತವೆ. ಪೃಥ್ವೀರಾಜ ರಾಸೋವನ್ನು ಬರೆದ ಚಂದಬರದಾಈ ಇಂಥ ಕಥೆಗಳನ್ನು ಹೆಣೆದ. ಇವುಗಳ ಐತಿಹಾಸಿಕತೆ ಸಂದೇಹಾಸ್ಪದ.

	ಚೌಳುಕ್ಯ ಮನೆತನದ ಮೂರು ಭಿನ್ನ ಶಾಖೆಗಳು 9-12ನೆಯ ಶತಮಾನಗಳಲ್ಲಿ ರಾಜ್ಯವಾಳುತ್ತಿದ್ದುವು. ಅತ್ಯಂತ ಪ್ರಾಚೀನ ಶಾಖೆಗೆ ಸೇರಿದವರು ಮಧ್ಯಭಾರತದಲ್ಲಿ ಮಾಲವ ಮತ್ತು ಚೇದಿ ರಾಜ್ಯಗಳ ನೆರೆಯಲ್ಲಿದ್ದ ಮತ್ತಮಯೂರವೆಂಬ ನಗರದಲ್ಲಿ 9ನೆಯ ಶತಮಾನದಲ್ಲಿ ಆಳುತ್ತಿದ್ದರು. ಈ ಶಾಖೆಯ ಮೂರು ತಲೆಮಾರುಗಳವರ ಹೆಸರುಗಳು ತಿಳಿದಿವೆ. ಸಿಂಹವರ್ಮ, ಆತನ ಮಗ ಸಧನ್ವ ಮತ್ತು ಮೊಮ್ಮಗ ಅವನಿವರ್ಮ, ಅವನಿವರ್ಮ ತನ್ನ ಮಗಳಾದ ನೊಹಲಾಳನ್ನು ಕಲಚುರಿ ಮನೆತನದ 1ನೆಯ ಯುವರಾಜನಿಗೆ ಮದುವೆ ಮಾಡಿಕೊಟ್ಟಿದ್ದ. ಅವನಿವರ್ಮ ಶಿವಭಕ್ತ. ಮತ್ತಮಯೂರ ನಗರದಲ್ಲಿ ಖ್ಯಾತಿವೆತ್ತ ಶೈವಮಠವೊಂದಿತ್ತು. ಅದರ ಅಂದಿನ ಗುರು ಪ್ರಭಾವಶಿವನನ್ನು ಯುವರಾಜ ತನ್ನ ರಾಜ್ಯಕ್ಕೆ ಬರಮಾಡಿಕೊಂಡು ರೇವಾ ಸಮೀಪದಲ್ಲಿ ಚಂದ್ರೇಹಿ ಎಂಬಲ್ಲಿ ಒಂದು ಶಿವಾಲಯವನ್ನೂ ಮಠವನ್ನು ಕಟ್ಟಿಸಿ ಅಲ್ಲಿ ಆ ಗುರುವನ್ನು ನೆಲೆಗೊಳಿಸಿದ. ರಾಣಿಯಾದ ನೊಹಲಾ ಕೂಡ ಶಿವಭಕ್ತೆ. ಜಬ್ಬಲ್ಪುರ ಜಿಲ್ಲೆಯ ಬಿಲ್ಹರಿ ಗ್ರಾಮದಲ್ಲಿ ಆಕೆ ಒಂದು ಶಿವಾಲಯವನ್ನು ಕಟ್ಟಿಸಿ ಅದರ ವ್ಯವಸ್ಥೆಗಾಗಿ ಏಳು ಗ್ರಾಮಗಳನ್ನು ದತ್ತಿಯಾಗಿ ಬಿಟ್ಟಳೆಂದು ಶಾಸನದಿಂದ ತಿಳಿದಿದೆ.

	ಚೌಳುಕ್ಯರ ಮತ್ತೊಂದು ಶಾಖೆಯ ಸ್ಥಾಪಕ ಒಂದನೆಯ ಮೂಲರಾಜ (961-996). ಅಣಹಿಲಪಾಟಕ ಅವನ ರಾಜಧಾನಿಯಾಗಿತ್ತು. ಆ ಪಟ್ಟಣಕ್ಕೆ ಅನಹಿಲಪುರ, ಅನಹಿಲನಗರ, ಅಣಹಿಲಪಟ್ಟಣ ಮತ್ತು ಅಣಹಿಲವಾಡ ಎಂಬ ಹೆಸರುಗಳೂ ಇದ್ದುವು. ಮೂಲರಾಜನ ತಂದೆಯ ಹೆಸರು ರಾಜಿ; ತಾಯಿ ಲೀಲಾದೇವಿ. ಈಕೆ ಚಾರ್ಪೋತ್ಕಟ ಅರಸ ಸಾಮಂತಸಿಂಹನ ಸೋದರಿ. ಸೋಮನಾಥಕ್ಕೆ ಯಾತ್ರೆಗಾಗಿ ಬಂದ ರಾಜಿ ಅಣಹಿಲಪಾಟಕದ ಸಾಮಂತಸಿಂಹನಿಂದ ಆಕರ್ಷಿಸಲ್ಪಟ್ಟು ಅಲ್ಲಿ ನೆಲಸಿದ. ಮೂಲರಾಜ ಸೋದರಮಾವನ ಮನೆಯಲ್ಲೇ ಬೆಳೆದ. ಆದರೆ ಅನಂತರ ಸಾಮಂತ ಸಿಂಹನನ್ನೇ ಸೋಲಿಸಿ ಕೊಂದು ಅರಸನಾದ.

	ರಾಜ್ಯವಿಸ್ತರಣೆಯಲ್ಲಿ ತೊಡಗಿದ ಮೂಲರಾಜ ಕಚ್ಛದೇಶದ ಅರಸನಾದ ಲಾಖಾನನ್ನು ಸೋಲಿಸಿ ಕೊಂದು ಆ ದೇಶವನ್ನು ವಶಪಡಿಸಿಕೊಂಡ. ಆದರೆ ಚಹಮಾನ ವಂಶದ ಶಾಕಂಬರೀ ಅರಸನಾದ ವಿಗ್ರಹರಾಜನೂ ಚೌಳುಕ್ಯರ ಇನ್ನೊಂದು ಶಾಖೆಗೆ ಸೇರಿದ. ಕರ್ನಾಟಕದ ಚೌಳುಕ್ಯ ತೈಲಪನ ಸಾಮಂತನಾಗಿದ್ದ ಬಾರಪ್ಪನೂ ಕೂಡಿಕೊಂಡು ಇವನ ವಿರುದ್ಧ ಸೈನ್ಯಾಚರಣೆಯಲ್ಲಿ ತೊಡಗಿದಾಗ, ವಿಗ್ರಹರಾಜನೊಡನೆ ಕದನವಿರಾಮದ ಒಪ್ಪಂದ ಮಾಡಿಕೊಂಡ ಮೂಲರಾಜ ಅನಂತರ ತನ್ನ ಮಗ ಚಾಮುಂಡರಾಜನನ್ನು ಬಾರಪ್ಪನ ವಿರುದ್ಧ ಕಳಿಸಿದ. ಬಾರಪ್ಪ ಕದನಲ್ಲಿ ಮಡಿದ. ಪರಮಾರ ಮುಂಜನೂ ಮೂಲರಾಜನಿಗೆ ಕಿರುಕುಳ ಕೊಟ್ಟ. ಅವನು ತನಗೆ ತಲೆಬಾಗುವಂತೆ ಮಾಡಿದನಾದರೂ ಮೂಲರಾಜ ಅತ್ಯಂತ ಪ್ರಯಾಸದಿಂದ ತನ್ನ ರಾಜ್ಯವನ್ನು ಉಳಿಸಿಕೊಂಡ.

	ಮೂಲರಾಜ ಶಿವಾರಾಧಕನಾಗಿದ್ದ ಅವನು ಮಂಡಲಿಯಲ್ಲಿ (ಈಗಿನ ಮಾಂಡರ್) ಒಂದು ದೇವಾಲಯವನ್ನೂ ತನ್ನ ರಾಜಧಾನಿಯಲ್ಲಿ ಎರಡು ದೇವಾಲಯಗಳನ್ನೂ ಕಟ್ಟಿಸಿದ.

	ಮೂಲರಾಜ ಸಿಂಹಾಸನವನ್ನು ತ್ಯಜಿಸಿದ ಮೇಲೆ ಚಾಮುಂಡರಾಜ (996-1010) ಪಟ್ಟಕ್ಕೆ ಬಂದ. ಪರಮಾರ ಮುಂಜನ ಸೋದರನಾದ ಸಿಂಧುರಾಜನ ದಾಳಿಯಿಂದ ತನ್ನ ರಾಜ್ಯವನ್ನು ರಕ್ಷಿಸಿದರೂ ಇವನ ಕಳಚುರಿ ಇಮ್ಮಡಿ ಕೊಕ್ಕಲನಿಗೆ ಮಣಿಯಬೇಕಾಯಿತು. ತಾನು ಮಾಡಿದ ಪಾಪಕೃತ್ಯವೊಂದರ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಉದ್ದೇಶದಿಂದ ತನ್ನ ಮಗ ವಲ್ಲಭರಾಜನಿಗೆ ರಾಜ್ಯಾಡಳಿತವನ್ನು ವಹಿಸಿಕೊಟ್ಟು ತೀರ್ಥಯಾತ್ರೆಗಾಗಿ ಕಾಶಿಗೆ ಹೋದ. ಮಾರ್ಗದಲ್ಲಿ ಪರಮಾಭೋಜನಿಂದ ಅವಮಾನಿತನಾಗಿ ಸೇಡು ತೀರಿಸಿಕೊಳ್ಳಬೇಕೆಂದು ಮಗನಿಗೆ ಆದೇಶ ನೀಡಿದ ಸೈನ್ಯಸಮೇತ ಮಾಳವಕ್ಕೆ ದಂಡೆತ್ತಿ ಹೋದ ವಲ್ಲಭರಾಜ ಸಿಡುಬು ರೋಗಕ್ಕೆ ತುತ್ತಾಗಿ ಹಾದಿಯಲ್ಲೇ ಮಡಿದ. ಅವನ ತಮ್ಮ ದುರ್ಲಭರಾಜ ಸಿಂಹಾಸನವನ್ನೇರಿದ (1010-1022).

	ಚಾಹಮಾನ ಮಹೇಂದ್ರನ ಸೋದರಿಯನ್ನು ಸ್ವಯಂವರದಲ್ಲಿ ದುರ್ಲಭರಾಜ ವರಿಸಿದ್ದಕ್ಕಾಗಿ ಕುಪಿತರಾಗಿ ಸೈನ್ಯದೊಡನೆ ಧಾವಿಸಿ ಬಂದ ಮಾಳವ, ಮಥುರ, ಹೂಣ ದೇಶಗಳ ಒಡೆಯರನ್ನು ಅವನು ಸೋಲಿಸಿದ. ಅನಂತರ ಲಾಟದೇಶ ಅವನ ಕೊಳ್ಳೆಗೆ ತುತ್ತಾಯಿತು. ದುರ್ಲಭರಾಜ ಇಳಿವಯಸ್ಸಿನಲ್ಲಿ ಸಿಂಹಾಸನವನ್ನು ತನ್ನ ಭಾತ್ರೀಯ 1ನೆಯ ಭೀಮದೇವನ ಸಲುವಾಗಿ ಕಟ್ಟಿಸಿದ. 

	ಭೀಮದೇವನ ಆಳ್ವಿಕೆಯ (1022-1064) ಪ್ರಾರಂಭದಲ್ಲಿ ಘಜ್ನಿó ಮಹಮೂದ ಸೋಮನಾಥ ದೇವಾಲಯವನ್ನು ಲೂಟಿಮಾಡಿದ, ಮುಸಲ್ಮಾನ ಸೇನೆ ಗುಜರಾತನ್ನು ಪ್ರವೇಶಿಸುತ್ತಿದ್ದಂತೆ ಭೀಮದೇವ ಕಚ್ಛದಲ್ಲಿದ್ದ ಕಂಠ ಕೋಟೆಗೆ ಪಲಾಯನ ಮಾಡಿದ. ದಾಳಿಕೋರರು ಹೊರಟುಹೋದ ಮೇಲೆ ತನ್ನ ರಾಜಧಾನಿಗೆ ಹಿಂದಿರುಗಿದ. ಅನಂತರ ಪರಮಾರ ಧಂಡುಕನಾದ ಅಬುವನ್ನು ವಶಪಡಿಸಿಕೊಂಡು ವಿಮಲನನ್ನು ತನ್ನ ಪ್ರತಿನಿಧಿಯಾಗಿ ನೇಮಿಸಿದ. ಪುನಃ ಮಾಳವವನ್ನು ಮುತ್ತಿ ಕೃಷ್ಣರಾಜನನ್ನು ಬಂಧಿಸಿ ಬಿನಮಲ್ ಅನ್ನು ವಶಪಡಿಸಿಕೊಂಡ. ಅವನು ಪರಮಾರ 1ನೆಯ ಭೋಜ, ಕಳಚುರಿ ಕರ್ಣ ಇವರ ಅಳಿವಿಗೆ ಬಹುಮಟ್ಟಿಗೆ ಕಾರಣನಾದ.

	ಭೀಮದೇವನಿಗೆ ಬೇರೆಬೇರೆ ಹೆಂಡತಿಯರಲ್ಲಿ ಮೂಲರಾಜ, ಕ್ಷೇಮರಾಜ ಮತ್ತು ಕರ್ಣ ಎಂಬ ಮೂವರು ಮಕ್ಕಳಿದ್ದರು. ಮೂಲರಾಜ ಕಿರಿ ವಯಸ್ಸಿನಲ್ಲೇ ಸತ್ತ. ಕ್ಷೇಮರಾಜನ ತಾಯಿ ಹೀನಕುಲದವಳೆಂಬ ಕಾರಣವನ್ನು ಮುಂದೊಡ್ಡಿ ಮೂರನೆಯ ಮಗನಾದ ಕರ್ಣನಿಗೆ ಭೀಮ ಪಟ್ಟಕಟ್ಟಿದ.

	ತ್ರೈಲೋಕ್ಯಮಲ್ಲನೆಂಬ ಬಿರುದಿನೊಡನೆ ಆಡಳಿತವನ್ನು ಆರಂಭಿಸಿದ ಕರ್ಣ (1064-1094) ಚಾಳುಕ್ಯರೊಡಗೂಡಿ ಪರಮಾರ ಜಯಸಿಂಹನನ್ನು ಸೋಲಿಸಿ ಕೊಂದು ತನ್ನ ರಾಜ್ಯದ ದಕ್ಷಿಣದ ಮೇರೆಯನ್ನು ನವಸಾರಿಯವರೆಗೆ ವಿಸ್ತರಿಸಿದನಾದರೂ ಉದಯಾದಿತ್ಯ ಅವನನ್ನು ಓಡಿಸಿ ಮಾಳವವನ್ನು ಪುನಃ ಪಡೆದುಕೊಂಡ. ಕದಂಬ ಜಯಕೇಶಿಯ ಮಗಳಾದ ಮಯಣಲ್ಲದೇವಿ ಈತನ ಪತ್ನಿ. 1094ರಲ್ಲಿ ಇನ್ನೂ ಅಲ್ಪವಯಸ್ಕನೂ ಇವನ ಮಗನೂ ಆಗಿದ್ದ ಜಯಸಿಂಹನ ಪ್ರತಿನಿಧಿಯಾಗಿ ಮಯಣಲ್ಲದೇವಿ ಕೆಲವು ವರ್ಷಗಳ ಕಾಲ ಅಧಿಕಾರಸೂತ್ರಗಳನ್ನು ವಹಿಸಿದಳು.

	ಸಿದ್ಧರಾಜನೆಂದು ಬಿರುದಾಂಕಿತನಾದ ಜಯಸಿಂಹ (1094-1144) ಈ ವಂಶದ ಸುಪ್ರಸಿದ್ಧ ರಾಜ. ಇವನು ಸುಮಾರು 12 ವರ್ಷಗಳ ಕಾಲ ಪರಮಾರರೊಡನೆ ಯುದ್ಧ ಮಾಡಿ ನರವರ್ಮ ಮತ್ತು ಯಶೋವರ್ಮರನ್ನು ಸ್ಥಾನಭ್ರಷ್ಟರನ್ನಾಗಿ ಮಾಡಿ ಮಾಳವವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಚಾಹಮಾನ ಅರ್ಣೋರಾಜನನ್ನು ಸೋಲಿಸಿ ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿ ಅವನು ತನ್ನ ಸಾಮಂತನಾಗಿರುವಂತೆ ಮಾಡಿದ. ದಕ್ಷಿಣದಲ್ಲಿ ಚಾಳುಕ್ಯ ಆರನೆಯ ವಿಕ್ರಮಾದಿತ್ಯನ ಮೇಲೆ ಜಯ ಗಳಿಸಿದ. ಕಳಚುರಿ ಯಶಃಕರ್ಣ ಹಾಗೂ ಗಾಹಡವಾಲದ ಗೋವಿಂದಚಂದ್ರನೊಡನೆ ಸ್ನೇಹಸಂಬಂಧ ಹೊಂದಿದ್ದ. ಇವನು ಸಿಂಧ್ ಅರಬ್ಬರ ಮೇಲಣ ಯುದ್ಧದಲ್ಲಿ ಜಯಗಳಿಸಿದನೆಂದು ಹೇಳಲಾಗಿದೆ. ಇವನು ಗುಜರಾತ್, ಕಾಠಿಯಾವಾಡ್, ಕಚ್ಛ, ಮಾಳವ, ದಕ್ಷಿಣ ರಾಜಪುಟಾಣ ಪ್ರದೇಶಗಳ ಆಧಿಪತ್ಯ ಹೊಂದಿದ್ದನೆಂದು ಅಲ್ಲಿ ದೊರಕಿರುವ ಅವನ ಶಾನಗಳಿಂದ ತಿಳಿದುಬರುತ್ತದೆ. ಇವನು 1113-14ರಲ್ಲಿ ಸಿಂಹಶಕೆಯನ್ನು ಪ್ರಾರಂಭಿಸಿದ. ಅನೇಕ ದೇವಾಲಯಗಳು ಮತ್ತು ಒಂದು ದೊಡ್ಡ ಸರೋವರ ಇವನ ಕಾಲದಲ್ಲಿ ಕಟ್ಟಲ್ಪಟ್ಟವು. ಇವನು ಜೈನ ಕವಿ ಹೇಮಚಂದ್ರನ ಪೋಷಕನಾಗಿದ್ದನಲ್ಲದೆ ನ್ಯಾಯಶಾಸ್ತ್ರ, ಜ್ಯೋತಿಷ ಮತ್ತು ಪುರಾಣಗಳ ಅಭ್ಯಾಸಕ್ಕೆ ಪ್ರೋತ್ಸಾಹ ಕೊಟ್ಟ.

	ಜಯಸಿಂಹ ಮಕ್ಕಳಿಲ್ಲದೆ ಸತ್ತದ್ದರಿಂದ, ಅವನ ಸಂಬಂಧಿ ಕುಮಾರಪಾಲ ರಾಜನಾದ (1144-1473). ಅವನು ಶಾಕಂಬರಿಯ ಚಾಹಮಾನರು, ಪರಮಾರರು, ಕಳಚುರಿಗಳು ಮತ್ತು ಇತರರ ಮೇಲೆ ಯುದ್ಧ ಮಾಡಿದ. ಜೈನಮುನಿ ಹೇಮಚಂದ್ರನ ಪ್ರಭಾವಕ್ಕೊಳಗಾಗಿ ಜೈನಧರ್ಮ ಸ್ವೀಕರಿಸಿದ. ತಾನು ಮದ್ಯಮಾಂಸಗಳನ್ನು ತ್ಯಜಿಸಿದ್ದೇ ಅಲ್ಲದೆ ಪ್ರಾಣಿವಧೆ, ಮಾಂಸ ತಿನ್ನುವುದು, ಜೂಜಾಟ ಮತ್ತು ವೇಶಾವೃತ್ತಿಯನ್ನು ರಾಜ್ಯದಾದ್ಯಂತ ನಿಷೇಧಿಸಿದ. ಮಕ್ಕಳಿಲ್ಲದೆ ಸತ್ತವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಶಾಸನವನ್ನು ರದ್ದುಗೊಳಿಸಿದ. ಜೈನಧರ್ಮವನ್ನು ಅವಲಂಬಿಸಿದ್ದರೂ ತನ್ನ ಮನೆತನದ ದೇವರಾದ ಸೋಮನಾಥಕ್ಕೆ ನಡೆದುಕೊಂಡ. ಅವನ ಶಾಸನಗಳಲ್ಲಿ ಶಿವಸ್ತುತಿಗಳಿವೆ. ಅವನ ಆಳ್ವಿಕೆಯಲ್ಲಿ ಚೌಳುಕ್ಯ ರಾಜ್ಯ ಬಹು ವ್ಯಾಪಕವಾಗಿತ್ತು.

	ಅವನ ಅನಂತರ ಸಿಂಹಾಸನಕ್ಕಾಗಿ ದಾಯಾದಿಗಳಲ್ಲಿ ಕಲಹಗಳೇರ್ಪಟ್ಟು ರಾಜ್ಯಾಡಳಿತ ಸಡಿಲಗೊಂಡಿತು. ಅಜಯಪಾಲ (1173-76), ಇಮ್ಮಡಿ ಮೂಲರಾಜ (1176-78), ಇಮ್ಮಡಿ ಭೀಮದೇವ (1178-1239) ಇವರು ಅನುಕ್ರಮವಾಗಿ ಆಳಿದರು. 1178ರಲ್ಲಿ ಭೀಮದೇವ ಮಹಮ್ಮದ್ ಘೋರಿಯನ್ನು ಸೋಲಿಸಿದ. 1197ನಲ್ಲಿ ಕುತ್ಬ್-ಉದ್-ದೀನ ಅಣಹಿಲವಾಡವನ್ನು ಲೂಟಿ ಹೊಡೆದ. ಅಲ್ಲಾವುದ್ದೀನ್ ಖಿಲ್ಜಿ 1299ರಲ್ಲಿ ಕರ್ಣನಿಂದ ಚೌಳುಕ್ಯ ರಾಜ್ಯವನ್ನು ವಶಪಡಿಸಕೊಂಡ, ಕರ್ಣ ಈ ವಂಶದ ಕೊನೆಯ ರಾಜ.

	ಚೌಳುಕ್ಯ ಮನೆತನದ ಮೂರನೆಯ ಲಾಟದಲ್ಲಿ ಆಳುತ್ತಿದ್ದರು. ಇವರಲ್ಲಿ ಮೊದಲಿಗ ಬಾರಪ್ಪ. ಈತ ಕಾನ್ಯಕುಬ್ಜದ ಅರಸನ ಸೇನಾನಿಯೆಂದು ಸುಕೃತ ಸಂಕೀರ್ತನದ ಅರಸಿಂಹನ ಹೇಳಿಕೆ. ಬಾರಪ್ಪನ ತಾಯಿ ಕಾನ್ಯಕುಬ್ಜದ ರಾಷ್ಟ್ರಕೂಟ ಮನೆತನದ ರಾಜಕುಮಾರಿಯಾಗಿದ್ದಳೆಂದು ಶಾಸನಗಳಿಂದ ತಿಳಿದಿದೆ. ಆದರೆ ಈತ ಚಾಳುಕ್ಯ ಇಮ್ಮಡಿ ತೈಲಪನ ಸಾಮಂತನೆಂದೂ ಸೇನಾಪತಿಯಾಗಿದ್ದನೆಂದೂ ಪ್ರಬಂಧ ಚಿಂತಾಮಣಿಯ ಮೇರುರುಂಗ ಹೇಳಿದ್ದಾನೆ. ಇದನ್ನು ಈಗ ಒಪ್ಪಲಾಗಿದೆಯಲ್ಲದೆ, ಬಾರಪ್ಪ ಚೌಳುಕ್ಯ ವಂಶಕ್ಕೆ ಸೇರಿದವನೆಂಬುದನ್ನೂ ಅಂಗೀಕರಿಸಲಾಗಿದೆ. ಹತ್ತನೆಯ ಶತಮಾನದ ಮಧ್ಯಭಾಗದಲ್ಲಿ ಅಧಿಕಾರದಲ್ಲಿದ್ದ ಈತನ ಮನೆತನದ ಇನ್ನೂ ಐವರು ಪರಿಚಿತರಾಗಿದ್ದಾರೆ. ಬಾರಪ್ಪ, ಗೊಗ್ಗಿರಾಜ, ಕೀರ್ತಿರಾಜ, ವತ್ಸರಾಜ ತ್ರಿಲೋಚನಪಾಲ, ಬಾರಪ್ಪನಿಗೂ ಮೊದಲು ನಿಂಬಾರ್ಕನೆಂಬುವನು ಈ ಸಂತತಿಯಲ್ಲಿ ಆಳಿದನೆಂದು ಇತ್ತೀಚೆಗೆ ಲಭಿಸಿದ ಶಾಸನದಿಂದ ತಿಳಿದಿದೆ. ರಾಷ್ಟ್ರಕೂಟ ಕೊಕ್ಕಿಲನನ್ನು ಸೋಲಿಸಿದ ಅನಂತರ ತೈಲಪ ಲಾಟ ದೇಶದಲ್ಲಿ ಬಾರಪ್ಪನನ್ನು ತನ್ನ ಸಾಮಂತನಾಗಿ ನೆಲೆಗೊಳಿಸಿದನೆಂದು ತೋರುತ್ತದೆ.

	ಚೌಳುಕ್ಯ ಚಾಮುಂಡರಾಜ ಬಾರಪ್ಪನ ವಿರುದ್ಧ ದಂಡೆತ್ತಿ ಅವನನ್ನು ಕೊಂದನೆಂದು ಹೇಳಿದೆ. ಸ್ವಲ್ಪ ಕಾಲದ ಅನಂತರ ಚೌಳುಕ್ಯರ ಸಹಾಯದಿಂದ ಗೊಗ್ಗಿರಾಜ ಲಾಟಮಂಡಲವನ್ನು ಹಿಂದಕ್ಕೆ ಪಡೆದುಕೊಂಡನೆಂದು ತೋರುತ್ತದೆ. ಗೊಗ್ಗಿರಾಜನ ಮಗ ಕೀರ್ತಿಪಾಲ ತನ್ನ ಶಾಸನದಲ್ಲಿ ಮಹಾಮಂಡಲೇಶ್ವರನೆಂದು ತನ್ನನ್ನು ಕರೆದುಕೊಂಡಿದ್ದಾನೆ. ಆದರೆ ಸುಮಾರು 1018ರ ಅನಂತರ ಕೀರ್ತಿಪಾಲ ದುರ್ಲಭ ರಾಜನಿಗೆ ಸೋತ. ಲಾಟ ಗುಜರಾತಿನ ಚೌಳುಕ್ಯರ 1053ರ, ಸುಮಾರು ಮೂರು ದಶಕಗಳ ಅನಂತರದ, ಶಾಸನ ದೊರೆತಿದೆ. ಆಗ ಸ್ವಲ್ಪ ಪುನಃ ಲಾಟದಲ್ಲಿ ಇವರು ಆಳಿದರೆಂದೂ ಕರ್ಣ ಇದನ್ನು ಪುನಃ ಸ್ವಾಧೀನಪಡಿಸಿ ಕೊಳ್ಳಬೇಕಾಯಿತೆಂದೂ ಅದರಿಂದ ಊಹಿಸಲಾಗಿದೆ.

	ವಾಸ್ತು, ಶಿಲ್ಪ : ಗುಜರಾತಿನ ಚೌಳುಕ್ಯರ ಆಡಳಿತದಲ್ಲಿ ನಾಗರ ಶೈಲಿ ಪ್ರಾದೇಶಿಕ ವೈಶಿಷ್ಟ್ಯಗಳೊಂದಿಗೆ ಚೌಳುಕ್ಯ ಅಥವಾ ಶೋಲಂಕಿ ಶೈಲಿಗೆ ಅನುವುಮಾಡಿಕೊಟ್ಟಿತು. ರಾಜರು, ಮಂತ್ರಿಗಳು, ರಾಜಪ್ರತಿನಿಧಿಗಳು ಹಾಗೂ ಜನಸಾಮಾನ್ಯರ ಉತ್ತೇಜನದಿಂದಾಗಿ ಸಮೃದ್ಧ ಮತ್ತು ವೈಭವಯುತ ವಾಸ್ತು, ಶಿಲ್ಪ ಬೆಳೆದುವು, ಗುಜರಾತ್ ಅಂತರರಾಷ್ಟ್ರೀಯ ವ್ಯಾಪಾರದ ಕೇಂದ್ರವಾಗಿತ್ತು. ಕಲೆ ಹುಲುಸಾಗಿ ಬೆಳೆಯಲು ಅಲ್ಲಿಯ ವರ್ತಕರು ಕಾರಣರಾದರು. ಈ ಎಲ್ಲ ಕಾರಣಗಳಿಂದ ಗುಜರಾತ್ ಶೋಭಾಯಮಾನವಾದ ಕಟ್ಟಡಗಳಿಂದ ತುಂಬಿತು. ಆದರೆ ಈ ಕಾಲದ ಅನೇಕ ದೇವಾಲಯಗಳು ನಾಶವಾಗಿವೆ.

	ಈ ದೇವಾಲಯಗಳಲ್ಲಿ ಪೂರ್ಣವಾಗಿರುವುದೆಂದರೆ ಸುನಕ್‍ನಲ್ಲಿರುವ ನೀಲಕಂಠ ಮಹಾದೇವ. ಇದರಲ್ಲಿ ಗರ್ಭಗುಡಿ, ಮಂಟಪ ಮತ್ತು ಮುಖಮಂಟಪಗಳಿವೆ. ಮಂಟಪದ ಚಾವಣಿ ಹಲವು ಅಂತಸ್ತುಗಳಿಂದ ಕೂಡಿದೆ. ಪ್ರತಿ ಚಾವಣಿಯಲ್ಲೂ ಆಮಲಕ ಮತ್ತು ಕಲಶಗಳನ್ನು ಜೋಡಿಸಲಾಗಿದೆ. ಗರ್ಭಗುಡಿಯ ಮೇಲಣ ಶಿಖರವೂ ಅಂಗ ಶಿಖರಗಳ ಶ್ರೇಣಿಗಳಿಂದ ಕೂಡಿದೆ. ಮಂಟಪದ ಬದಿಯಲ್ಲಿ ಕಕ್ಷಾಸನಗಳಿವೆ. ಗೋಡೆಗಳ ಹಾಗೂ ಸ್ತಂಭಗಳ ಮೇಲೆ ನಾಜೂಕಾದ ಕೆತ್ತನೆಯನ್ನು ಕಾಣಬಹುದು.

	ಇದಕ್ಕೆ ಸಾಮ್ಯವುಳ್ಳ ದೇವಾಲಯಗಳಲ್ಲಿ ಕುಂಭಾರಿಯದ ಜೈನದೇವಾಲಯ, ಮೋಧೇರರ ಸೂರ್ಯ ದೇವಾಲಯ, ದೆಲ್ ಮಾಲ್‍ನ ಲಿಂಬೋಜಿ ಮಾತಾ, ಮಿಯಾನಿಯ ನೀಲಕಂಠ ದೇವಾಲಯ ಮಖ್ಯವಾದವು. ಗುಮ್ಮಟಕ್ಕೆ ಆಧಾರವಾಗಿರುವ ಅಷ್ಟಮಾನ ಕಂಬಗಳ ಗುಂಪಿನಲ್ಲಿ ಜೈನ ದೇವಾಲಯದ ಒಳಗಡೆಯ ವಿನ್ಯಾಸದ ಪ್ರಗತಿಯನ್ನು ಕಾಣಬಹುದು. ಈಗಿನ ಲಂಬೋಜಿ ಮಾತಾವನ್ನು ಪುರಾತನ ನಿವೇಶನದಲ್ಲಿ ಕಟ್ಟಲಾಗಿದೆ. ಆದರೆ ಅಂಗಳದ ನೈಋತ್ಯ ಹಾಗೂ ಆಗ್ನೇಯ ಭಾಗಗಳಲ್ಲಿರುವ ಲಕ್ಷ್ಮೀನಾರಾಯಣ ಮತ್ತು ಸೂರ್ಯದೇವಾಲಯಗಳು ಪುರಾತನವಾದವು. ಅವುಗಳ ವಿನ್ಯಾಸ ಹಾಗೂ ಅಲಂಕಾರ ಸರಳವಾಗಿವೆ.

	ಚೌಳುಕ್ಯ ದೇವಾಲಯ ರಚನೆ 11ನೆಯ ಶತಮಾನದಲ್ಲಿ ಶ್ರೇಷ್ಠ ರೂಪ ತಾಳಿತು. ಈ ಕಾಲದ ಹೆಚ್ಚು ಪ್ರಭಾವಯುತವಾದ ದೇವಾಲಯವೆಂದರೆ ಮೋಧೇರದ ಸೂರ್ಯ ದೇವಾಲಯ. ವಿಶಾಲವಾದ ವ್ಯವಸ್ಥೆ. ವಿವಿಧ ಭಾಗಗಳ ಸಂಯೋಜನೆ-ಇವು ಈ ದೇವಾಲಯದ ವೈಶಿಷ್ಟ್ಯಗಳು. ನೆಲಗಟ್ಟು ಮಾಡಿದ ಜಗತಿಯ ಮೇಲೆ ನಿಂತಿರುವ ಈ ದೇವಾಲಯದಲ್ಲಿ ಮೂರು ಮುಖ್ಯ ಅಂಗಗಳಿವೆ. ದೇವಾಲಯದ ಮುಂಭಾಗದಲ್ಲಿ ಪೂರ್ವಕ್ಕೆ, ಪವಿತ್ರ ಕುಂಡವುಂಟು. ಇದರ ಸೋಪಾನದ ಮಧ್ಯಭಾಗಗಳಲ್ಲಿ ಉಪದೇವಾಲಯಗಳಿವೆ. ಪಶ್ಚಿಮ ಭಾಗದ ಸೋಪಾನದ ಮೇಲೆ ಶೋಭಾಯಮಾನವಾಗಿ ಕೆತ್ತಿದ ಕೀರ್ತಿ ತೋರಣವಿದೆ. ಇದರ ಹಿಂದೆಯೇ ಸಭಾಮಂಟಪ, ಇದನ್ನು ಅತ್ಯುತ್ಕøಷ್ಟವಾದ ಕಂಬಗಳುಳ್ಳ ವೈಭವದ ರಾಶಿ ಎಂದು ವರ್ಣಿಸಲಾಗಿದೆ. ಈ ವಿವಿಧ ಅಂಗಗಳನ್ನು ಚಾಕಚಕ್ಯದಿಂದ ಜೋಡಿಸಿ ಅಖಂಡತೆ ಸಾಧಿಸಲಾಗಿದೆ. ಸಭಾಮಂಟಪದ ಕಂಬಗಳು ಮನೋಹರವಾದ ಕೆತ್ತನೆಯಿಂದ ಕೂಡಿದವು.

	ಗರ್ಭಗುಡಿಯ ಸುತ್ತ ಮುಚ್ಚಿದ ಪ್ರದಕ್ಷಿಣ ಪಥವುಂಟು. ಮಂಟಪದ ಮಧ್ಯದ ಕಂಬಗಳನ್ನು ಅಷ್ಟಕೋನಾಕಾರದಲ್ಲಿ ಜೋಡಿಸಲಾಗಿದೆ. ಅವುಗಳ ಮೇಲೆ ಗುಮ್ಮಟ ಹಾಗೂ ಅಲಂಕಾರಯುತವಾದ ಚಾವಣಿ ಇವೆ. ಗರ್ಭಗುಡಿಯ ಮಂಭಾಗದಲ್ಲಿ ನಾಲ್ಕು ಕಂಬಗಳುಳ್ಳ ಅಂತರಾಳ ಮಂಟಪವಿದೆ. ಮಂಟಪ ಹಾಗೂ ಪ್ರದಕ್ಷಿಣ ಪಥದಲ್ಲಿ ಗಾಳಿ ಬೆಳಕುಗಳಿಗಾಗಿ ಕಿಟಕಿಗಳಿವೆ. ಈ ದೇವಾಲಯ ಹಾಳು ಬಿದ್ದಿದ್ಯಾಗ್ಯೂ ಭಾರತೀಯ ಶಿಲ್ಪಿಗಳು ವೈಭಯುತವಾದ ಕಟ್ಟಡಗಳನ್ನು ಕಟ್ಟಲು ಸಮರ್ಥರಾಗಿದ್ದರೆಂಬುದಕ್ಕೆ ಸಾಕ್ಷಿಯಗಿದೆ.

	ಚೌಳುಕ್ಯ ರಾಜರು ವಾಸ್ತುಶಿಲ್ಪ ಕಲೆಗೆ ತಮ್ಮ ಪ್ರೋತ್ಸಾಹವನ್ನು 12ನೆಯ ಶತಮಾನದಲ್ಲೂ ಮುಂದುವರಿಸಿದರು. ಜಯಸಿಂಹ ಸಿದ್ಧಾಪುರದಲ್ಲಿ ರುದ್ರಮಾಲ ಅಥವಾ ರುದ್ರ ಮಹಾಲಯವನ್ನು ಕಟ್ಟಿಸಿದ. ಮುಸಲ್ಮಾನರ ದಾಳಿಗೆ ತುತ್ತಾದ ಸೋಮನಾಥ ದೇವಾಲಯವನ್ನು ಅನೇಕ ಸಾರಿ ಕಟ್ಟಲಾಗಿದೆ. ಈ ದೇವಾಲಯದಲ್ಲಿ ಪ್ರಾಚೀನ ವೈಭವವನ್ನು ಈಗಲೂ ಕಾಣಬಹುದು.

	13ನೆಯ ಶತಮಾನದ ಕಟ್ಟಡಗಳಲ್ಲಿ ಈ ಘನತೆ ಇಲ್ಲ. ಆ ಕಾಲದ ಅನೇಕ ಕಟ್ಟಡಗಳು ಜೈನಧರ್ಮಕ್ಕೆ ಸೇರಿದವು. ಇವು ಶತೃಜ್ಞ ಮತ್ತು ಗಿರ್‍ನಾರ್ ಬೆಟ್ಟಗಳಲ್ಲಿವೆ. ಮೌಂಟ್ ಆಬುದಲ್ಲಿರುವ ದಿಲ್‍ವಾರದ ತೇಜಪಾಲನ ಸಭಾಂಗಣ ಕೆಲವು ವಿಧದಲ್ಲಿ ಪ್ರಸಿದ್ಧವಾದ ನಿರ್ಮಾಣವಾಗಿದ್ದರೂ ವಾಸ್ತುಶಿಲ್ಪ ದೃಷ್ಟಿಯಿಂದ ಪರಿಣಾಮಕಾರಿಯಲ್ಲ.
(ಜಿ.ಬಿ.ಆರ್.; ಎಚ್.ವಿ.ಎಸ್.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ